ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್: ಏಷ್ಯದ ಇತಿಹಾಸ, ಪ್ರಾಚೀನ ಸಂಪ್ರದಾಯ, ಕಲೆ, ಶಾಸ್ತ್ರ, ಸಾಹಿತ್ಯಗಳೇ ಮುಂತಾದವುಗಳ ಕ್ರಮಬದ್ದ ಅಧ್ಯಯನದಲ್ಲಿ ಆಸಕ್ತರಾದ ವಿದ್ವಾಂಸರನ್ನುಳ್ಳ ಸಭೆ. 1784ರ ಜನವರಿ 15ರಂದು, ಆಗ ಭಾರತದ ಗವರ್ನರ್-ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸನ ಬೆಂಬಲದಿಂದ, ಕೋಲ್ಕತ್ತೆಯ ವರಿಷ್ಠ ನ್ಯಾಯಾಧೀಶ ಸರ್ ವಿಲಿಯಂ ಜೋನ್ಸನಿಂದ ಸ್ಥಾಪಿತವಾಯಿತು. ಆಗ ಇದರ ಹೆಸರು ಏಷ್ಯಾಟಿಕ್ ಸೊಸೈಟಿ ಎಂದು ಮಾತ್ರ ಇತ್ತು. ಈ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶದಿಂದ ಸರ್ ರಾಬರ್ಟ್ ಚೇಂಬರ್ಸನ ಅಧ್ಯಕ್ಷತೆಯಲ್ಲಿ ಕೋಲ್ಕತ್ತೆಯಲ್ಲಿ ಅಂದು ಸೇರಿದ್ದ ಸಭೆಯಲ್ಲಿ ಸರ್ ವಿಲಿಯಂ ಜೋನ್ಸ್‌ ಭಾಷಣ ಮಾಡುತ್ತ, ಪ್ರಕೃತಿಯ ಅಗಾಧ ಚೌಕಟ್ಟಿನಲ್ಲಿ ಏನೇನು ವಿರಳವಾಗಿದೆಯೋ ಅದನ್ನೆಲ್ಲ ಕುರಿತು ನೀವು ಅನ್ವೇಷಣೆ ನಡೆಸಬೇಕು. ಹೊಸ ಹೊಸ ಅವಲೋಕನ ಮತ್ತು ಪರಿಶೋಧನೆಗಳಿಂದ ಏಷ್ಯದ ಭೂವಿವರಣೆಯನ್ನು ತಿದ್ದಬೇಕು. ಒಮ್ಮೆ ಜನವಸತಿಯಿದ್ದ ಆಮೇಲೆ ಪರಿತ್ಯಕ್ತವಾದ ರಾಷ್ಟ್ರಗಳ ಇತಿಹಾಸವನ್ನೂ ಸಂಪ್ರದಾಯ ಗಳನ್ನೂ ಅನ್ವೇಷಿಸಬೇಕು. ಏಷ್ಯದ ಜನರ ನಾನಾ ಸರ್ಕಾರ ಪ್ರಕಾರಗಳನ್ನೂ ಸಾಮಾಜಿಕ ಧಾರ್ಮಿಕ ಸಂಸ್ಥೆಗಳನ್ನೂ ಬೆಳಕಿಗೆ ತರಬೇಕು. ಅಂಕಗಣಿತ, ಜ್ಯಾಮಿತಿ, ತ್ರಿಕೋಣಮಿತಿ, ಅಂಕಣಮಾನ, ಬಲವಿಜ್ಞಾನ, ದೃಗ್ವಿಜ್ಞಾನ, ಖಗೋಳವಿಜ್ಞಾನ ಮತ್ತು ಸಾಮಾನ್ಯ ಭೌತವಿಜ್ಞಾನಗಳ ಕ್ಷೇತ್ರಗಳಲ್ಲಿ ಅವರು ಮಾಡಿದ ಸುಧಾರಣೆಗಳನ್ನೂ ಅನುಸರಿಸಿದ ವಿಧಾನಗಳನ್ನೂ ಪರೀಕ್ಷಿಸಬೇಕು. ಅವರ ನೀತಿವ್ಯವಸ್ಥೆ, ವ್ಯಾಕರಣ, ಅಲಂಕಾರಶಾಸ್ತ್ರ ಮತ್ತು ಮೀಮಾಂಸ್ರಶಾಸ್ತ್ರಗಳನ್ನೂ ಶಸ್ತ್ರಚಿಕಿತ್ಸೆ ಮತ್ತು ವೈದ್ಯಗಳಲ್ಲಿ ಅವರ ಕೌಶಲವನ್ನೂ ಅಂಗರಚನಾವಿಜ್ಞಾನದಲ್ಲೂ ರಸಾಯನವಿಜ್ಞಾನದಲ್ಲೂ ಅವರು ಪಡೆದಿರಬಹುದಾದ ಪ್ರಗತಿಯನ್ನೂ ಪರೀಕ್ಷಿಸಬೇಕು. ಅವರ ವ್ಯವಸಾಯ, ಉತ್ಪಾದನೆ, ವ್ಯಾಪಾರಗಳನ್ನು ಕುರಿತು ಸಂಶೋಧನೆ ನಡೆಸಬೇಕಲ್ಲದೆ ಅವರ ಸಂಗೀತ, ಶಿಲ್ಪ, ಚಿತ್ರಕಲೆ, ಕಾವ್ಯಗಳನ್ನೂ ಅಧ್ಯಯನ ಮಾಡಬೇಕು. ಸಮಾಜಜೀವನದ ಸುಖಸಾಧನೆಗಳನ್ನು ನಯನಾಜೋಕು ಗಳನ್ನೂ ಸ್ವಲ್ಪವಾದರೂ ಒದಗಿಸುವ ಅಥವಾ ಅಧಿಕಗೊಳಿಸುವ ಸಣ್ಣಪುಟ್ಟ ಕಲೆಗಳನ್ನೂ ನೀವು ಕಡೆಗಣಿಸಬಾರದು’ ಎಂದು ಹೇಳಿದರು. ಒಟ್ಟಿನಲ್ಲಿ ಏಷ್ಯದ ಲೌಕಿಕ ಪ್ರಾಕೃತಿಕ ಇತಿಹಾಸ, ಪ್ರಾಚೀನತೆ, ಕಲೆ, ವಿಜ್ಞಾನ ಮತ್ತು ಸಾಹಿತ್ಯಗಳನ್ನು ಕುರಿತ ಸಂಶೋಧನೆಯೂ ಜ್ಞಾನಪ್ರಸಾರವೂ ಏಷ್ಯಾಟಿಕ್ ಸೊಸೈಟಿಯ ಉದ್ದೇಶ.
ಕಳೆದ ಸುಮಾರು 187 ವರ್ಷಗಳಲ್ಲಿ ಈ ಸಂಸ್ಥೆ ತನ್ನ ಕಾರ್ಯನಿರ್ವಹಣೆಯಲ್ಲಿ ಬಹಳವಾಗಿ ಸಫಲವಾಗಿದೆ. ಇಂಥ ಸಂಸ್ಥೆಗಳಲ್ಲಿಯೇ ಪ್ರಪ್ರಥಮವಾದ ಈ ಸಂಸ್ಥೆ ಏಷ್ಯದಲ್ಲಿ, ಅದರಲ್ಲೂ ಭಾರತದಲ್ಲಿ, ಸಾಹಿತ್ಯ, ವಿಜ್ಞಾನ ಮತ್ತು ಪ್ರಾಚ್ಯಸಂಶೋಧನೆಗಳ ಕ್ಷೇತ್ರಗಳಲ್ಲಿ ಇಂದು ಕಂಡುಬಂದಿರುವ ಪ್ರಗತಿಗೆ ಒಂದಿಲ್ಲೊಂದು ರೀತಿಯಲ್ಲಿ ಕಾರಣವಾಗಿದೆ. ಪ್ರಾರಂಭದಲ್ಲಿ ಇದರ ಕಾರ್ಯಕಾರಿಸಮಿತಿ ಒಬ್ಬ ಅಧ್ಯಕ್ಷ, ನಾಲ್ಕು ಜನ (ತರುವಾಯ ಮೂರು ಜನ) ಉಪಾಧ್ಯಕ್ಷರು, ಒಬ್ಬ ಕಾರ್ಯದರ್ಶಿ ಹಾಗೂ ಒಬ್ಬ ಕೋಶಾಧಿಕಾರಿ-ಇವರನ್ನೊಳಗೊಂಡಿದ್ದು, ಭಾರತದ ಗವರ್ನರ್-ಜನರಲ್ ಹಾಗೂ ಅವರ ಕಾರ್ಯಕಾರಿ ಮಂಡಲಿಯವರನ್ನು (ಲಾರ್ಡ್ ವಿಲಿಯಂ ಬೆಂಟಿಂಕನ ತರುವಾಯ ಗವರ್ನರ್-ಜನರಲನ್ನು ಮಾತ್ರ) ಪೋಷಕರನ್ನಾಗಿ ನಿವೇದಿಸುತ್ತ ಬಂದಿದ್ದು, ಇಂದು ಬಂಗಾಲದ ರಾಜ್ಯಪಾಲರು ಈ ಸ್ಥಾನವನ್ನಲಂಕರಿಸುತ್ತಾರೆ. ಇದರ ಸದಸ್ಯತ್ವದಲ್ಲಿ ಪ್ರಾರಂಭದಲ್ಲಿ ಸಾಮಾನ್ಯ ಸದಸ್ಯ, ಸಹಸದಸ್ಯ, ಪತ್ರಕರ್ತಸದಸ್ಯ, ಮೊದಲಾದ ವರ್ಗಗಳಿದ್ದುವು. 1869ರ ಅನಂತರ ಪತ್ರಕರ್ತಸದಸ್ಯರನ್ನು ನಿಯಮಿಸುವ ರೂಢಿ ಮುಂದುವರಿಯಲಿಲ್ಲ. 1829ರವರೆಗೆ ಆಂಗ್ಲರಿಗೆ ಮಾತ್ರ ಸದಸ್ಯತ್ವಕ್ಕೆ ಪ್ರವೇಶವಿದ್ದು. ಆ ವರ್ಷದಿಂದ ಭಾರತೀಯ ಹಾಗೂ ಉಳಿದ ದೇಶಗಳ ಜನರಿಗೂ ಸದಸ್ಯತ್ವ ಲಭ್ಯವಾಯಿತು. 1851ರಲ್ಲಿ ಗೌರವ ಸದಸ್ಯರನ್ನಾರಿಸುವ ಕ್ರಮವನ್ನು ಜಾರಿಗೆ ತರಲಾಯಿತು. 1796ರಿಂದ ಸದಸ್ಯರಿಗೆ ಚಂದಾಹಣ ವಿಧಿಸಲಾಯಿತು. ಇತ್ತೀಚಿನ ಕೆಲವರ್ಷಗಳಿಂದ ಈ ಸಂಸ್ಥೆ ತನ್ನ ಫೆಲೋಷಿಪ್ಪನ್ನು ಗಣ್ಯ ವಿದ್ವಾಂಸರಿಗೆ ನೀಡುತ್ತಿದೆ. ಇದು 1784ರಿಂದ 1832ರ ವರೆಗೆ ಏಷ್ಯಾಟಿಕ್ ಸೊಸೈಟಿ ಎಂದೂ 1832ರಿಂದ 1935ರವರೆಗೆ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂದೂ 1935ರಿಂದ 1951ರವರೆಗೆ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂದೂ ತರುವಾಯ ಪುನಃ ಏಷ್ಯಾಟಿಕ್ ಸೊಸೈಟಿ ಎಂದೂ ಪ್ರಸಿದ್ಧವಾಗಿದೆ. ಲಂಡನ್ನಲ್ಲಿ ಪ್ರಾರಂಭವಾದ ದಿ ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್ ಸಂಸ್ಥೆ 1829ರಲ್ಲಿ ಬಂಗಾಲದ ಏಷ್ಯಾಟಿಕ್ ಸೊಸೈಟಿ ತನ್ನೊಡನೆ ವಿಲೀನವಾಗಲು ಬಂiÀÄಸಿದ್ದರೂ ಇದು ಆ ಕೋರಿಕೆಗೆ ಒಡಂಬಡಲಿಲ್ಲ.

1788ರಲ್ಲಿ ಈ ಸಂಸ್ಥೆಯ ಏಷ್ಯಾಟಿಕ್ ರಿಸರ್ಚಸ್ ಎಂಬ ಪತ್ರಿಕೆಯ ಪ್ರಥಮ ಸಂಪುಟ ಹೊರಬಂತು. 1839ರ ವರೆಗೆ ಇದರ 20 ಸಂಪುಟಗಳು ಪ್ರಕಟವಾದ ಅನಂತರ ಈ ಪತ್ರಿಕೆಯ ಪ್ರಕಟನೆ ಮುಂದುವರಿಯಲಿಲ್ಲ. 1821ರಲ್ಲಿ ವಿಲ್ಸನ್ ರಿಂದ ಕ್ವಾರ್ಟರ್ಲಿ ಓರಿಯಂಟಲ್ ಜರ್ನಲ್ ಎಂಬ ಪತ್ರಿಕೆಯ ಪ್ರಕಟನೆ ಪ್ರಾರಂಭವಾಯಿತು. ಈ ಸಂಸ್ಥೆ ಟ್ರಾನ್ಸ್‌ಸಾಕ್ಷನ್ಸ್‌ ಆಫ್ ದಿ ಮೆಡಿಕಲ್ ಅಂಡ್ ಫಿಸಿಕಲ್ ಸೊಸೈಟಿ ಎಂಬ ಪತ್ರಿಕೆ ಪ್ರಾರಂಭಿಸಿತು. 1827ರ ತರುವಾಯ ಇವು ಹೊರಬರಲಿಲ್ಲ. 1829ರಲ್ಲಿ ಕ್ಯಾಪ್ಟನ್ ಹರ್ಬರ್ಟ್ ಗ್ಲೀನಿಂಗ್ಸ್‌ ಇನ್ ಸೈನ್ಸ್‌ ಎಂಬ ಮಾಸಪತ್ರಿಕೆ ಪ್ರಾರಂಭಿಸಿದ. ಅವನ ತರುವಾಯ ಅದರ ಸಂಪಾದಕನಾದ ಜೇಮ್ಸ್‌ ಪ್ರಿನ್ಸೆಪ್ ಈ ಪತ್ರಿಕೆಯ ಹೆಸರನ್ನು ಜರ್ನಲ್ ಆಫ್ ದಿ ಏಷ್ಯಾಟಿಕ್ ಸೊಸೈಟಿ ಎಂದು ಬದಲಿಸಿದೆ. 1832ರಲ್ಲಿ ಈ ಪತ್ರಿಕೆಯ ಮೊದಲನೆಯ ಸಂಪುಟ ಜರ್ನಲ್ ಆಫ್ ದಿ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಹೆಸರಿನಿಂದ ಹೊರಬಂತು. ಅಂದಿನಿಂದ ಇಂದಿನವರೆಗೆ ಇದು ನಾಲ್ಕು ಶ್ರೇಣಿಗಳಲ್ಲಿ ಪ್ರಕಟವಾಗಿದ್ದು ಇಲ್ಲಿಯವರೆಗೆ ಇದರ 136ಕ್ಕೂ ಹೆಚ್ಚು ಸಂಪುಟಗಳು ಬೆಳಕು ಕಂಡಿವೆ. ಈ ಪತ್ರಿಕೆಯಲ್ಲದೆ, ಈ ಸಂಸ್ಥೆಯ ಇತರ ಪ್ರಕಟನೆಗಳ ಪೈಕಿ ಇಯರ್ ಬುಕ್ ಆಫ್ ದಿ ಏಷ್ಯಾಟಿಕ್ ಸೊಸೈಟಿ; ಬಿಬ್ಲಿಯೊಥಿಕ್ ಏಷ್ಯಾಟಿಕ್, ಬಿಬ್ಲಿಯೊಥಿಕ್ ಇಂಡಿಕ, ರಾಮಾಯಣ, ಋಗ್ವೇದ (ಮಾಕ್ಸ್‌ಮುಲ್ಲರನಿಂದ ಸಂಪಾದಿತವಾದ್ದು)-ಇವು ಮುಖ್ಯವಾಗಿವೆ.
ಬಹುಕಾಲದವರೆಗೆ ಈ ಸಂಸ್ಥೆಯ ಅಧೀನದಲ್ಲಿದ್ದ ಪ್ರಾಚ್ಯಸಂಶೋಧನೆ, ಭೂಗರ್ಭವಿಜ್ಞಾನ, ಪ್ರಾಣಿವಿಜ್ಞಾನ, ಸಸ್ಯವಿಜ್ಞಾನ ಮೊದಲಾದವುಗಳಿಗೆ ಸಂಬಂಧಪಟ್ಟ ವಸ್ತುಸಂಗ್ರಹಾಲಯಗಳನ್ನು 1866ರಲ್ಲಿ ಒಂದು ನ್ಯಾಸ ಮಂಡಲಿಗೆ (ಬೋರ್ಡ್ ಆಫ್ ಟ್ರಸ್ಟೀಸ್) ವರ್ಗಾಯಿಸಲಾಯಿತು. ಭಾರತದ ಬೃಹದ್ವಸ್ತುಸಂಗ್ರಹಾಲಯಗಳಲ್ಲಿ ಒಂದಾದ ಇಂಡಿಯನ್ ಮ್ಯೂಸಿಯಂ ಉಗಮವಾದದ್ದೂ ಇವುಗಳಿಂದ.

ಈ ಸಂಸ್ಥೆ ಈ ರೀತಿ ಮಹತ್ತರವಾದ ಸೇವೆ ಸಲ್ಲಿಸಲು ಅನೇಕ ಪಾಶ್ಚಾತ್ಯ ಹಾಗೂ ಭಾರತೀಯ ಸಂಶೋಧಕರೂ ಉನ್ನತಾಧಿಕಾರಿಗಳೂ ವಿದ್ವಾಂಸರೂ ಕಾರಣ. ಅವರಲ್ಲಿ ಈ ಸಂಸ್ಥೆಯ ಸಂಸ್ಥಾಪಕರೂ ಪ್ರಥಮ ಅಧ್ಯಕ್ಷರೂ ಆದ ಸರ್ ವಿಲಿಯಂ ಜೋನ್ಸ್‌, ಸರ್ ಜಾನ್ ಶೋರ್, ಸರ್ ಚಾಲ್ರ್ಸ್‌ ವಿಲ್ಕಿನ್ಸ್‌, ಹೆನ್ರಿ ಥಾಮಸ್ ಕೋಲ್ಬ್ರೂಕ್, ಎಚ್.ಎಚ್. ವಿಲ್ಸನ್, ಜೇಮ್ಸ್‌ ಪ್ರಿನ್ಸೆಪ್, ಈಶ್ವರಚಂದ್ರ ವಿದ್ಯಾಸಾಗರ, ಸುನೀತಕುಮಾರ ಚಟರ್ಜಿ ಹಾಗೂ ಆರ್.ಸಿ. ಮಜುಮ್ದಾರ್ ಇವರು ಉಲ್ಲೇಖಾರ್ಹರು (ನೋಡಿ- ಏಷ್ಯಾಟಿಕ್-ಸೊಸೈಟಿ-ಆಫ್-ಬಾಂಬೆ). 		   (ಎಂ.ಎನ್.ಕೆ.; ಬಿ.ಕೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ